     ಮೂಲದೊಡನೆ ಪರಿಶೀಲಿಸಿ
ಕಪ್ಪು ಸಮುದ್ರ : ಉತ್ತರ ಮತ್ತು ಪುರ್ವಗಳಲ್ಲಿ ರಷ್ಯದಿಂದಲೂ ಪಶ್ಚಿಮದಲ್ಲಿ ರೊಮೇನಿಯ ಮತ್ತು ಬಲ್ಗೇರಿಯಗಳಿಂದಲೂ ದಕ್ಷಿಣ ಮತ್ತು ನೈಋತ್ಯಗಳಲ್ಲಿ ತುರ್ಕಿಯಿಂದಲೂ ಆವೃತವಾದ ಭೂ ಮಧ್ಯ ಸಮುದ್ರ, ಬಾಸ್ಟೋರಸ್ ಜಲ ಸಂಧಿಯ ಮೂಲಕವಾಗಿ ಮರ್ಮಾರ ಸಮುದ್ರಕ್ಕೂ ಡಾರ್ಡನಲ್ಸ್‌ ಮೂಲಕವಾಗಿ ಮೆಡಿಟರೇನಿಯನ್ ಸಮುದ್ರದ ಏಜಿಯನ್ ಶಾಖೆಗೂ ಸಂಬಂಧವಿದೆ. ಈಶಾನ್ಯದ ಅeóÁಫ್ ಸಮುದ್ರಕ್ಕೂ ಇದಕ್ಕೂ ನಡುವೆ ಕೆರ್ಚ್ ಜಲಸಂಧಿಯಿದೆ. 

1008 ಕಿಮೀ ಉದ್ದವಾಗಿಯೂ 528 ಕಿಮೀ ಪರಮಾವಧಿ ಅಗಲವಾಗಿಯೂ ಇರುವ ಈ ಸಮುದ್ರದ ವಿಸ್ತಾರ 4,66,200 ಚ. ಕಿಮೀ. ಇದರ ತಳ ಉತ್ತರದಿಂದ ದಕ್ಷಿಣಕ್ಕೆ ಇಳಿಜಾರಾಗಿದೆ. ಕ್ರಿಮಿಯದ ಪಶ್ಚಿಮಕ್ಕೆ ಇದರ ಆಳ 150 ಮೀ ಗಳಿಗಿಂತ ಹೆಚ್ಚಿಲ್ಲ. ಇದರ ಹೆಚ್ಚಿನ ಭಾಗ 50 ಮೀ ಗಿಂತ ಕಡಿಮೆಯೆಂದೇ ಹೇಳಬಹುದು. ಕ್ರಿಮಿಯದ ದಕ್ಷಿಣದಲ್ಲಿ ಇದರ ಆಳ ಶೀಘ್ರವಾಗಿ ಹೆಚ್ಚಿ 1500 ಮೀ ಗಳಾಗಿ ಅನಟೋಲಿಯ ತೀರದ ಸಿನಾಪಿನ ವಾಯವ್ಯದಲ್ಲಿ 2200 ಮೀ ಗಳಿಗೂ ಹೆಚ್ಚು ಆಳವಾಗಿರುತ್ತದೆ. ಇದು ಪರಮಾವಧಿ.

ಪ್ರಾಚೀನ ಭೂ ಯುಗದಲ್ಲಿ ಕಪ್ಪುಸಮುದ್ರ ರೂಪುಗೊಂಡಿತು. ಮೆಡಿಟರೇನಿಯನ್ ಸಮುದ್ರದೊಂದಿಗೆ ಇದರ ಸಂಪರ್ಕವೇರ್ಪಟ್ಟಿತು. ಅದಕ್ಕೆ ಮೊದಲು ಇದೊಂದು ಆಳವಾದ ಉಪ್ಪು ಸರೋವರವಾಗಿತ್ತು. ಆಗ ನೀರಿನ ಮಟ್ಟ ಏರಿ ಉತ್ತರತೀರದ ತಗ್ಗುನೆಲವನ್ನೆಲ್ಲಾ ಆವರಿಸಿ, ನದಿಗಳ ಮುಖಗಳನ್ನೆಲ್ಲಾ ಮುಳುಗಿಸಿತು. ಡ್ಯಾನ್ಯೂಬ್, ನೀಪರ್ ಮುಂತಾದ ನದಿಗಳಿಂದ ಅಗಾಧ ಜಲರಾಶಿ ಇದಕ್ಕೆ ಬಂದು ಸೇರುವುದರಿಂದ ಇದರ ಮೇಲ್ಭಾಗ ಸಾಪೇಕ್ಷವಾಗಿ ಹೆಚ್ಚು ಹೊಸತಾಗಿದ್ದರೂ ಸು. 200 ಮೀ ಕೆಳಗಣ ಭಾಗ ನಿಂತನೀರಿನಿಂದ ಕೂಡಿರುತ್ತದೆ. ಇಲ್ಲಿ ಹೈಡ್ರೋಜನ್ ಸಲ್ಫೈಡ್ ಅಧಿಕವಾಗಿರುವುದಕ್ಕೂ ಆಳದಲ್ಲಿ ವಾಸಿಸುವಂಥ ಜೀವರಾಶಿ ಇಲ್ಲದಿರುವುದಕ್ಕೂ ಇದು ಕಾರಣ. ಪ್ರವಾಹದ ದಿಕ್ಕು ಅಪ್ರದಕ್ಷಿಣೆ. ಮೇಲಣ ನೀರು ಬಾಸ್ಟೋರಸ್ ಮೂಲಕ ಹರಿದುಹೋಗುತ್ತದೆ. 20 ಮೀ ಕೆಳಗೆ ಮೆಡಿಟರೇನಿಯನ್ ನೀರು ಒಳಬರುತ್ತದೆ. ಇಲ್ಲಿ ಉಬ್ಬರಗಳಿಲ್ಲ. ಆದರೆ ಬಿರುಗಾಳಿ ಅನಿರೀಕ್ಷಿತವಾಗಿ ಪದೇಪದೇ ಸಂಭವಿಸಿ ನೀರಿನಮಟ್ಟದ ಏರಿಕೆಗೆ ಕಾರಣವಾಗುತ್ತದೆ.

ಕಪ್ಪುಸಮುದ್ರದ ತೀರಪ್ರದೇಶದಲ್ಲಿ ಭಿನ್ನತೆಗಳುಂಟು. ಪಶ್ಚಿಮದಲ್ಲಿ, ರುಮೇಲಿ ಭೂಶಿರದಿಂದ ಕಲಿಯಾಕ್ರ ಭೂಶಿರದವರೆಗೆ, ಸಮುದ್ರದ ಸುತ್ತಣ ಭಾಗ ಸ್ವಲ್ಪ ಎತ್ತರವಾಗಿದೆ. ಅದರ ಹಿಂದೆ ಭವ್ಯವಾದ ಪರ್ವತಶ್ರೇಣಿಗಳುಂಟು. ವಾಯವ್ಯ ಮತ್ತು ಉತ್ತರ ಭಾಗಗಳಲ್ಲಿ ತೀರಪ್ರದೇಶ ತಗ್ಗು, ವಿಸ್ತಾರವಾಗಿಯೂ ಕಡಿದಾಗಿಯೂ ಇರುವ ಮುಮ್ಮೈಯುಳ್ಳ ಅನೇಕ ದಿಣ್ಣೆಗಳು ರಷ್ಯದ ಬಂದರಾದ ಒಡೆಸ್ಸಕ್ಕೆ ಒಂದು ಆಕರ್ಷಣೀಯವಾದ ಆವರಣವನ್ನು ಒದಗಿಸಿಕೊಟ್ಟಿದೆ. ನದಿಗಳ ಬಾಯಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕಲು ಮಣ್ಣು ಶೇಖರಣೆಯಾಗುವುದರಿಂದ ಸಮುದ್ರಯಾನ ಕಷ್ಟಕರ. ಡ್ಯಾನ್ಯೂಬ್ ನದಿಯ ಮುಖಜಭೂಮಿ ವಿಸ್ತಾರವಾಗಿದೆ. ಅದು ಮರಳುರಾಶಿಯನ್ನೇ ನಿರ್ಮಿಸಿದೆ. ತೀರದ ಬಳಿ ಆಳವೂ ಲವಣತ್ವವೂ ಕಡಿಮೆಯಾಗಿರುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರು ಗಡ್ಡೆಕಟ್ಟುವುದುಂಟು. ಅeóÁಫ್ ಸಮುದ್ರ ಮೂರು ತಿಂಗಳ ಕಾಲ ಗಡ್ಡೆಕಟ್ಟಿರುತ್ತದೆ. ಕ್ರಿಮಿಯದ ದಕ್ಷಿಣತೀರಕ್ಕೆ ಸಮಾನಾಂತರವಾಗಿ ಪರ್ವತಗಳುಂಟು. ಕೆಲವು ಕಡೆಗಳಲ್ಲಿ (ಉದಾಹರಣೆಗೆ:ಮಾಲ್ಟಾ) ಸಣ್ಣ ಆಳಕೊಲ್ಲಿಗಳಿವೆ. ಕ್ರಿಮಿಯ ಪರ್ವತ ಪರ್ಯಾಯದ್ವೀಪಕ್ಕೆ ಪಶ್ಚಿಮದಲ್ಲಿರುವ ಸೆವಾಸ್ಟಾಪೋಲ್ ಬಂದರು ಎಲ್ಲ ದೃಷ್ಟಿಗಳಿಂದಲೂ ಬಲು ಪ್ರಶಸ್ತವಾದದ್ದು.

ಕಪ್ಪು ಸಮುದ್ರದ ಪುರ್ವದ ಕಡೆಗೆ ಕಾಕಸಸ್ ಪರ್ವತಗಳು ಎದ್ದುನಿಂತಿವೆ. ಕೆಲವು ಶ್ರೇಣಿಗಳು ಸಮುದ್ರದವರೆಗೂ ಬಂದಿರುವುದುಂಟು. ತೀರ ಪ್ರದೇಶ ನೇರವಾಗಿದೆ. ಉತ್ತರದಲ್ಲಿ ನವರೊಸಿಕ್ ಒಂದು ದೊಡ್ಡ ಹಡಗುನಿಲ್ದಾಣ. ಆನಟೋಲಿಯಾದ ತೀರದಲ್ಲೂ ಒಳ್ಳೆಯ ಬಂದರುಗಳಿಲ್ಲ. ಉತ್ತರದಿಂದ ಬೀಸುವ ಗಾಳಿಗೆ ಎದುರಾಗಿರುವುದರಿಂದ ಅಲ್ಲಿ ಸಮುದ್ರಯಾನ ಕಷ್ಟಕರ. 

ಈ ಸಮುದ್ರಕ್ಕೆ ಕಪ್ಪುಸಮುದ್ರವೆಂದು ನಾಮಕರಣ ಮಾಡಿದವರು ತುರ್ಕರು. ಚಂಡಮಾರುತದಿಂದ ಅಲ್ಲೋಲಕಲ್ಲೋಲವಾಗುತ್ತಿದ್ದ ಸಮುದ್ರವನ್ನು ನೋಡಿ ಹೆದರಿ ಅವರು ಇದಕ್ಕೆ ಆ ಹೆಸರಿಟ್ಟರು. ಇದೊಂದು ಕಪ್ಪಾದ ಅನುಭವವಾದ್ದರಿಂದ ಇದು ಕಪ್ಪುಸಮುದ್ರ ಆಯಿತು. ಪ್ರ.ಶ.ಪು. 7 ಶತಮಾನಗಳ ಹಿಂದೆ ಗ್ರೀಕರು ದಕ್ಷಿಣತೀರ ಪ್ರದೇಶದಲ್ಲಿ ತಮ್ಮ ವ್ಯಾಪಾರಕೋಠಿಗಳನ್ನು ಕಟ್ಟಿಕೊಂಡು ಏಜಿಯನ ದ್ವೀಪಗಳೊಡನೆ ವ್ಯಾಪಾರ ನಡೆಸುತ್ತಿದ್ದರು. ಕೆರ್ಚ್ ಜಲಸಂಧಿಯಲ್ಲಿ ಅವರು ವಸಾಹತುಗಳನ್ನು ಸ್ಥಾಪಿಸಿ, ಅeóÁಫ್ ಪ್ರದೇಶದ ವ್ಯಾಪಾರವೆಲ್ಲವನ್ನೂ ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರು.

330ರಲ್ಲಿ ಕಾನ್ಸ್ಟಾಂಟಿನೋಪಲ್ನ್ನು ಸ್ಥಾಪಿಸಲಾಯಿತು. ಇದರಿಂದ ಕಪ್ಪು ಸಮುದ್ರದ ಪ್ರಾಮುಖ್ಯ ಹೆಚ್ಚಿತು. 8-10ನೆಯ ಶತಮಾನದವರೆಗೆ ತುರ್ಕರ ಬುಡಕಟ್ಟಿಗೆ ಸೇರಿದ್ದ ಖಾಜ಼ರರಿಗೂ ಬೈeóÁಂಟಿಯನ್ರಿಗೂ ವ್ಯಾಪಾರ ಬೆಳೆಯಿತು. 907ರಲ್ಲಿ ಕೀವ್ ದೇಶದ ದೊರೆ ಕಾನ್ಸ್ಟಾಂಟಿನೋಪಲಿನ ಮೇಲೆ ಆಕ್ರಮಣ ನಡೆಸಲಾಗಿ ಬೈeóÁಂಟಿಯನ್ರಿಗೂ ಕೀವ್ಗೂ ವಾಣಿಜ್ಯ ಒಪ್ಪಂದ ಏರ್ಪಟ್ಟಿತು. ಆದರೆ ಕಪ್ಪುಸಮುದ್ರದ ವ್ಯಾಪಾರವನ್ನು ಕೀವ್, ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. 11ನೆಯ ಶತಮಾನದಲ್ಲಿ ಸೆಲ್ಜುಕ್ ತುರ್ಕರು ಮತ್ತೆ ಕಪ್ಪು ಸಮುದ್ರದ ಆಗ್ನೇಯ ತೀರದ ಮೇಲೆ ದಾಳಿಯಿಟ್ಟು ಆ ಪ್ರದೇಶದ ಜನರನ್ನು ಹಿಂಸಿಸಿದರು. 1453ರಲ್ಲಿ ಆಟೋಮನ್ ತುರ್ಕರು ಕಾನ್ಸ್ಟಾಂಟಿನೋಪಲ್ನ್ನು ವಶಪಡಿಸಿಕೊಂಡಾಗ ಹೊಸಯುಗ ಪ್ರಾರಂಭವಾಯಿತು. ಅಲ್ಲಿಂದ ಮುಂದೆ ಅದು ತುರ್ಕಿ ಸರೋವರವೆಂದು ಪರಿಗಣಿತವಾಯಿತು. ಇಟಾಲಿಯನರ ಮತ್ತು ಫ್ರೆಂಚರ ಕೈಯಲ್ಲೂ ಅನಂತರದಲ್ಲಿ ಇಂಗ್ಲಿಷರ ಕೈಯಲ್ಲೂ ಇಲ್ಲಿ ವ್ಯಾಪಾರವಿತ್ತು.

ಮಸ್ಕೊವಿ ರಾಜ್ಯ ಬೆಳೆದಾಗ, ರಷ್ಯದ ಪೀಟರ್ ಮಹಾಶಯ ಕಪ್ಪುಸಮುದ್ರದ ಮೇಲೆ ಕಣ್ಣಿಟ್ಟ. ತುರ್ಕರ ದಾಳಿಯಿಂದ ತನ್ನ ದೇಶದ ವ್ಯಾಪಾರ ಹಡಗುಗಳನ್ನು ರಕ್ಷಿಸಲು ಪ್ರಬಲವಾದ ನೌಕಾಪಡೆ ಕಟ್ಟಿದ ಕ್ರಿಮಿಯದಲ್ಲಿ ಅಳಿದುಳಿದಿದ್ದ ಮಂಗೋಲ್ ವಿರುದ್ಧ ದಾಳಿಮಾಡಲು ಅeóÁಫ್ ಸಮುದ್ರದಲ್ಲಿ ತೋಪುಖಾನೆಗಳನ್ನು ನಿರ್ಮಿಸಲಾಯಿತು. ಕಪ್ಪುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರಕ್ಕೆ ಸಂಬಂಧ ಕಲ್ಪಿಸುವ ಜಲಸಂಧಿಗಳ ಮೇಲೆ ಹತೋಟಿಗಾಗಿ ರಷ್ಯನ್ನರಿಗೂ ಆಟೋಮನ್ ಸಾಮ್ರಾಜ್ಯಕ್ಕೂ ಯುದ್ಧಗಳು ಜರುಗುತ್ತಲೇ ಇದ್ದುವು. ರಷ್ಯ ಕ್ರಮೇಣ ಸುತ್ತಮುತ್ತಲ ನೆಲವನ್ನು ಆಕ್ರಮಿಸಿಕೊಂಡಿತು. 

ಆರ್ಥಿಕ ಅಭಿವೃದ್ಧಿಯಾದಂತೆ ಬಂದರುಗಳು ಬೆಳೆದುವು. ನಿಕಲಯೆಫ್, ಒಡೆಸ್ಸ, ಸೆವಾಸ್ಪಪೋಲ್ ನೌಕಾನೆಲೆ- ಇವೆಲ್ಲ ನಿರ್ಮಿತವಾದುವು. 18 ಮತ್ತು 19ನೆಯ ಶತಮಾನಗಳಲ್ಲಿ ಬೆಸರೇಬಿಯದ ನೈಋತ್ಯಕ್ಕೆ ಆಟೊಮನ್ ಪ್ರಭಾವ ತಗ್ಗಿತು. ಸ್ವತಂತ್ರ ರೊಮೇನಿಯ ಬಲ್ಗೇರಿಯಗಳು ಜನ್ಮ ತಳೆದುವು. ಕ್ರಿಮಿಯನ್ ಯುದ್ಧವನ್ನು ಕೊನೆಗೊಳಿಸುವ ಪ್ಯಾರಿಸ್ ಒಪ್ಪಂದ (1856) ಆದಾಗ ಕಪ್ಪುಸಮುದ್ರದಲ್ಲಿ ರಷ್ಯದ ಪ್ರಭಾವಕ್ಕೆ ಕುಂದುಂಟಾಯಿತು. ಆದರೆ 1870ರಲ್ಲಿ ರಷ್ಯ ಈ ನಿರ್ಬಂಧಗಳನ್ನು ಕಿತ್ತೊಗೆದದ್ದರಿಂದ 1914ರ ವರೆಗೂ ಅದು ಕಪ್ಪು ಸಮುದ್ರದಲ್ಲಿ ತನ್ನ ಚಟುವಟಿಕೆ ಬೆಳೆಸಿಕೊಳ್ಳಲು ಯಾವ ತಡೆಯೂ ಇರಲಿಲ್ಲ. ಸೋವಿಯತ್ ದೇಶಕ್ಕೆ ಕಪ್ಪು ಸಮುದ್ರದಿಂದ ಸರ್ವಋತುಗಳಲ್ಲೂ ಸಾಗರ ಸಂಬಂಧ ವೇರ್ಪಟ್ಟಿದೆ. ಆದ್ದರಿಂದ ಅದಕ್ಕೆ ಈ ಸಮುದ್ರ ಬಲು ಮುಖ್ಯ. ಬಟೂಂ ಮತ್ತು ನಾವರಸ್ಟೀಸ್ಕ್‌ ಗಳಿಂದ ತೈಲವೂ ಪಾಟಿಯಿಂದ ಮ್ಯಾಂಗನೀಸೂ ಜ್ಡನಫ್ನಿಂದ ಕಲ್ಲಿದ್ದಲೂ ಕೆರ್ಚಿನಿಂದ ಕಬ್ಬಿಣದ ಅದಿರೂ ನಾವರಸ್ಟೀಸ್ಕ್‌ನಿಂದ ಸಿಮೆಂಟೂ ಒಡೆಸ್ಸ, ನ್ಯಿಕಲಯೆಫ್, ಕೆರ್ಸನ್ ಮತ್ತು ನಾವರಸ್ಟೀಸ್ಥ್‌ಗಳಿಂದ ಧಾನ್ಯವೂ ಸಾಗುತ್ತವೆ.

ಸಿನಾಪ್ ಮತ್ತು ಟ್ರಾಬ್eóÁನ್ಗಳು ಹಿಂದೆ ತುರ್ಕಿಯ ಪ್ರಮುಖ ಬಂದರುಗಳಾಗಿದ್ದುವು. ಈಗ ಪಶ್ಚಿಮದ ಜಾಂಗುಲ್ಡಾಕ್ ಮುಖ್ಯ. ರೊಮೇನಿಯದ ಕಾನ್ಸ್ಟಾಂಟ್ ಮತ್ತು ಬಲ್ಗೇರಿಯದ ವಾರ್ನಾ ಮತ್ತು ಬುರ್ಗಾಸ್ಗಳು ಸ್ಥಳೀಯ ಪ್ರಾಮುಖ್ಯ ಪಡೆದಿವೆ.           (ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ